ಹಾಸನ: ಕೈಗಾರಿಕಾ ವಲಯದಲ್ಲಿರುವ ಹಿಮತ್ ಸಿಂಗ್ ಕಾ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಪುನೀತ್ ಅವರು ನೀರಿನ ಟ್ಯಾಂಕಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಅರಕಲಗೂಡು ತಾಲ್ಲೂಕಿನ ಕಸಬಾ ಹೋಬಳಿ, ನೇರಲಹಳ್ಳಿ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಪುನೀತ್, ಪ್ರಸ್ತುತ ಹಾಸನ ತಾಲ್ಲೂಕಿನ ಹನುಮಂತಪುರದಲ್ಲಿ ವಾಸವಾಗಿದ್ದು, ಕಳೆದ ಮೂರು ತಿಂಗಳಿಂದ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಮಾಡುವ ವೇಳೆ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಘಟನೆ ತಿಳಿದ ತಕ್ಷಣ ಹಾಸನ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ರಾತ್ರಿ 10 ಗಂಟೆ ಸುಮಾರಿಗೆ ಆಸ್ಪತ್ರೆಗೆ ಆಗಮಿಸಿದ ಸಂಬಂಧಿಕರು ಪುನೀತ್ ಸಾವಿನ ಬಗ್ಗೆ ಗಂಭೀರ ಶಂಕೆ ವ್ಯಕ್ತಪಡಿಸಿ, ಇದು ಅಪಘಾತವಲ್ಲ, ಕೊಲೆ ಎಂದು ಆರೋಪಿಸಿದರು.

ಮಧ್ಯಾಹ್ನ 3 ಗಂಟೆ ವೇಳೆಗೆ ಘಟನೆ ನಡೆದಿದ್ದರೂ ಸಂಜೆ 7 ಗಂಟೆಗೆ ಮಾತ್ರ ಮಾಹಿತಿ ನೀಡಲಾಗಿದೆ ಎಂದು ಕುಟುಂಬಸ್ಥರು ಆಕ್ಷೇಪಿಸಿದ್ದಾರೆ. ಕೆಲಸಕ್ಕೆ ಯೂನಿಫಾರ್ಮ್ ಧರಿಸಿ ಹೋಗಿದ್ದ ಪುನೀತ್ ಮೃತದೇಹವು ಬೇರೆ ಬಟ್ಟೆಯಲ್ಲಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೊಲೆ ಮಾಡಿ ಅದನ್ನು ಅಪಘಾತವೆಂದು ತೋರಿಸಲು ಯತ್ನಿಸಲಾಗಿದೆ ಎಂದು ಅವರು ಆರೋಪಿಸಿದರು.

ಆಸ್ಪತ್ರೆ ಎದುರು ಸುಮಾರು 30 ರಿಂದ 40 ಜನರು ಜಮಾಯಿಸಿ, ಕಾರ್ಖಾನೆ ಆಡಳಿತ ಮಂಡಳಿಯವರು ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಹೆಚ್ಚುವರಿ ಎಸ್ಪಿ ತಮ್ಮಯ್ಯ ಹಾಗೂ ಡಿವೈಎಸ್ಪಿ ಗಂಗಾಧರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿ ವರದಿ ಆಧಾರವಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾರ್ಖಾನೆಯಲ್ಲಿ ನೌಕರ ಮೃತಪಟ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ನಿರ್ವಹಣಾ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿಲ್ಲವೆಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಖಾನೆ ಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಬಂದು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ, ಕಾರ್ಖಾನೆಯಲ್ಲಿ ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಂತಹ ಸಾವು-ನೋವುಗಳ ಘಟನೆಗಳು ಪದೇ ಪದೇ ಸಂಭವಿಸುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ. “ಪುನೀತ್ ಸ್ಥಳೀಯನಾಗಿರುವುದರಿಂದ ಪ್ರಕರಣ ಮುಚ್ಚಿಹಾಕಲು ಸಾಧ್ಯವಾಗಿಲ್ಲ. ಕಾರ್ಖಾನೆ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು,” ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *