ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಹೋಬಳಿ ತೋಟಿ ಕೊಪ್ಪಲು ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಿಯ ಹಬ್ಬ ಭಾನುವಾರ ರಾತ್ರಿ ವೈಭವದಿಂದ ನಡೆಯಿತು.
ಹಿನ್ನೆಲೆಯಲ್ಲಿ ಮುಂಜಾನೆಯೇ ದೇವಿಯ ದೇಗುಲಕ್ಕೆ ಹಸಿರು ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಲಂಕಾರ ಮಾಡಲಾಗಿದ್ದು ಉತ್ಸವದ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗಿತ್ತು.ದೇವಿಗೆ ಒಡವೆ ವಸ್ತ್ರಗಳಿಂದ ಅಲಂಕರಿಸಲಾಯಿತು. ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು ದೇವಿಗೆ ಅಭಿಷೇಕ ಜರುಗಿತು. ಭಕ್ತರು ಹಣ್ಣು ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿದರು. ದೇವಿಯ ದರ್ಶನ ಪಡೆದು ಪುನೀತರಾದರು.ಸಂಜೆ ಸುಮಾರಿನಲ್ಲಿ ಮಂಗಳವಾದ್ಯದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಹೆಣ್ಣು ಮಕ್ಕಳು ತಂಬಿಟ್ಟಿನ ಆರತಿ ಹಿಡಿದು ದೇವಿಯ ದೇಗುಲಕ್ಕೆ ಆಗಮಿಸಿದರು. ದೇವಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು. ಹೆಣ್ಣು ಮಕ್ಕಳು ದೇವಿಗೆ ತಂಬಿಟ್ಟಿನ ಆರತಿ ಬೆಳಗಿಸಿದರು.250 ವರ್ಷಗಳ ಇತಿಹಾಸ: ಗ್ರಾಮದ ಶ್ರೀ ಮಾರಮ್ಮ ದೇವಿ ದೇವಸ್ಥಾನಕ್ಕೆ ಸುಮಾರು 250 ವರ್ಷಗಳಿಗೂ ಮೀರಿದ ಇತಿಹಾಸವಿದೆ. ಪೂರ್ವ ಕಾಲದಲ್ಲಿ ಊರಿನಲ್ಲಿ ಪ್ಲೇಗ್, ಕಾಲರ ಹಾಗೂ ಇತರೆ ಸಾಂಕ್ರಾಮಿಕ ರೋಗಿಗಳು ತಲೆದೂರುತಿದ್ದು ಸಾವು ನೋವುಗಳು ಹೆಚ್ಚಾಗಿ ಸಂಭವಿಸುತಿದ್ದವು. ಜತೆಗೆ ಮಕ್ಕಳಲ್ಲಿ ದಡಾರ, ಸಿಡುಬು, ಆಮಶಂಕೆ, ಕಾಮಾಲೆ ಸೇರಿದಂತೆ ವಿವಿಧ ಅಪಾಯಕಾರಿ ಕಾಯಿಲೆಗಳು ಕಾಣಿಸಿಕೊಳ್ಳುತಿದ್ದು ಊರಿನ ಜನ ಶ್ರೀ ಮಾರಮ್ಮ ದೇವಿಗೆ ಮೊರೆ ಹೋದ ನಂತರ ಸಮಸ್ಯೆ ಪರಿಹಾರಗೊಂಡು ಗ್ರಾಮದಲ್ಲಿ ನೆಮ್ಮದಿ ನೆಲೆಸುತ್ತದೆ. ಅಂದು ಪೂರ್ವಜರು ಕಲ್ಲನ್ನು ನೆಟ್ಟು ಪೂಜಿಸಲಾರಂಭಿಸಿದ್ದು ವಿವಿಧ ಕಾಲಘಟ್ಟಗಳಲ್ಲಿ ಹಂತ ಹಂತವಾಗಿ ದೇಗುಲ ನಿರ್ಮಾಣಗೊಳಿಸಿ ಅಭಿವೃದ್ಧಿ ಮಾಡಲಾಗಿದೆ. ಇಂದಿಗೂ ಅದೇ ಭಯ ಭಕ್ತಿಯಿಂದ ಹಬ್ಬ ಆಚರಿಸುವುದು ವಿಶೇಷವಾಗಿದೆ. ಮಹಾ ಮಂಗಳಾರತಿ ನಂತರ ಅನ್ನದಾಸೋಹ ನಡೆಯಿತು. ಪ್ರಮುಖರಾದ ಕೃಷ್ಣೇಗೌಡ, ಮೂರ್ತಿ, ತಮ್ಮಯಣ್ಣ, ತೋಟಿ ಮಂಜು, ದೇವರಾಜು ಹಾಗೂ ಇತರರು ಇದ್ದರು.
