
ಅರಕಲಗೂಡು: ತಾಲೂಕಿನ ನೆಹರುನಗರ ಸಮೀಪದ ಖಾಸಗಿ ಕಲ್ಲು ಗಣಿಗಾರಿಕೆಯಿಂದ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಆರೋಗ್ಯದ ಮೇಲೆ ದುಸ್ಪರಿಣಾಮ ಹಾಗೂ ಇತರೆ ತೊಂದರೆ ಉಂಟಾಗುತ್ತಿದ್ದು,ಕ್ರಸರ್ ಸ್ಥಳಾಂತರ ಮಾಡುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಬಿಗಿ ಪಟ್ಟು ಹಿಡಿದ ಹಿನ್ನೆಲೆ ಕಳೆದ ಒಂದು ತಿಂಗಳಿಂದಲೂ 16ಮಂದಿ ಶಾಲಾ ಮಕ್ಕಳು ಶಾಲೆಗೆ ಗೈರಾಗಿ ಶಿಕ್ಷಣದಿಂದ ವಂಚಿತಗೊಂಡಿದ್ದಾರೆ.
ತಾಲೂಕಿನ ಮಲ್ಲಿಪಟ್ಟಣ ಹೋಬಳಿ ನೆಹರುನಗರ ಗ್ರಾಮದಲ್ಲಿ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಿವೆ.ಇವರೆಲ್ಲರೂ ಕೂಡ ಹೇಮಾವತಿ ಮುಳುಗಡೆ ಪ್ರದೇಶದಿಂದ ಬಂದವರೇ ಆಗಿದ್ದಾರೆ.ಸರಕಾರದ ಪುನರ್ವಸತಿ ಗ್ರಾಮ ಇದಾಗಿದೆ.ಕೊಣನೂರು-ಮಲ್ಲಿಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಬರುವ ಗ್ರಾಮವಾಗಿದೆ.ಇಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು,1ನೇ ತರಗತಿಯಿಂದ 5ನೇ ತರಗತಿ ತನಕ 16ಮಂದಿ ಮಕ್ಕಳು ವಿದ್ಯೆ ಕಲಿಯುತ್ತಿವೆ.ಈ ಎಲ್ಲಾ ಮಕ್ಕಳು ಕೂಡ ಬಡವರ್ಗದ ಮಕ್ಕಳೇ ಆಗಿದ್ದಾರೆ.
ಈ ಸಾಲಿನ ಶೈಕ್ಷಣಿಕ ಅವಧಿ ಮುಗಿಯುವ ಹಂತಕ್ಕೆ ಬಂದಿದ್ದು,ಮಕ್ಕಳು ಮಾತ್ರ ಒಂದು ತಿಂಗಳಿಂದ ಶಾಲೆಯನ್ನು ತೊರೆದು ಶಿಕ್ಷಣ ಸೇರಿದಂತೆ ಶಾಲೆಯಲ್ಲಿ ಸಿಗುವ ಇತರೆ ಮೂಲಸೌಕರ್ಯಗಳಿಂದಲೂ ಸಹ ವಂಚನೆಗೆ ಒಳಗಾಗಿದ್ದಾರೆ.ಕ್ರಷರ್ ಮತ್ತು ಪೋಷಕರ ನಡುವೆ ಉಂಟಾಗಿರುವ ಶೀತಲ ಸಮರ ದೇಶದ ಭವಿಷ್ಯ ರೂಪಿಸುವ ಮಕ್ಕಳ ಕಲಿಕೆ ಮೇಲೆ ದುಸ್ಪರಿಣಾಮ ಬೀರುತ್ತಿದೆ.ಈ ಸಮಸ್ಯೆ ನಿವಾರಣೆ,ಪರಿಹಾರಕ್ಕೆ ನೆಹರುನಗರ ವಿದ್ಯಾವಂತ ಯುವಕರು,ಸಂಘಟನೆಗಳಲ್ಲಿ ತೊಡಗಿರುವವರಿಗೆ ಅಷ್ಟೇನು ಕಷ್ಟಸಾಧ್ಯವಿಲ್ಲ.ಮೊದಲು ಮಕ್ಕಳ ಶಿಕ್ಷಣ ದೃಷ್ಠಿಯಿಂದ ನಿರ್ಧಾರಕ್ಕೆ ಬರುವ ಬದಲು ಯಾವುದೋ ಕಾರಣಕ್ಕೇ ಒಳಗಾಗಿ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟ ಆಡಿದಂತೆ ಕಂಡುಬರುತ್ತಿದೆ ಎನ್ನಬಹುದು.
ಪೋಷಕರಿಂದ ಪತ್ರ : ನೆಹರುನಗರ ಗ್ರಾಮದಿಂದ 200ಮೀಟರ್ ಅಂತರದಲ್ಲಿ ಕಾರ್ಯಾರಂಭ ಮಾಡುತ್ತಿರುವ ಖಾಸಗಿ ಕಷರ್ ನಿಂದ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ.ಅಲ್ಲದೆ ಗ್ರಾಮಸ್ಥರು ಕೂಡ ನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿಲ್ಲ.ಅಂತಿಮವಾಗಿ ಕ್ರಸರ್ ಸ್ಥಳಾಂತರ ಮಾಡುವ ತನಕ ನಮ್ಮ ಮಕ್ಕಳನ್ನು ನಾವು ಶಾಲೆಗೆ ಕಳುಹಿಸುವುದಿಲ್ಲ ಎಂಬ ಮನವಿ ಪತ್ರವನ್ನು ಶಾಲೆಯ 16ಮಂದಿ ಮಕ್ಕಳ ಪೋಷಕರು ಪ್ರತ್ಯೇಕವಾಗಿ ಮುಖ್ಯಶಿಕ್ಷಕರಿಗೆ ಬರೆದುಕೊಟ್ಟಿದ್ದಾರೆ.
ಶಿಕ್ಷಕದಿಂದ ಮನೆ ಭೇಟಿ,ಸಭೆ : ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು,ಶಾಲಾ ಶಿಕ್ಷಕರು ಅನೇಕ ಬಾರಿ ಗ್ರಾಮಕ್ಕೆ ತೆರಳಿ ಮಕ್ಕಳ ಮನೆ ಭೇಟಿಮಾಡಿ ವಿನಂತಿ ಮಾಡುತ್ತಿದ್ದರೂ ಕೂಡ ಪ್ರಯೋಜನಕ್ಕೆ ಬರುತ್ತಿಲ್ಲ.ಅಲ್ಲದೆ ನಿಮ್ಮ ಗ್ರಾಮದ ಮನೆ,ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವುದಾಗಿ ಶಿಕ್ಷಕರ ಬೇಡಿಕೊಂಡರೂ ಕೂಡ ಪೋಷಕರಿಂದ ಸ್ಪಂಧನೆ ದೊರೆಯುತ್ತಿಲ್ಲ.ಬೆಳಿಗ್ಗೆ 9-30ಕ್ಕೆ ಶಾಲೆಗೆ ಬರುವ ಇಬ್ಬರು ಶಿಕ್ಷಕರು ಮಕ್ಕಳಿಲ್ಲದೆ ಶಾಲಾ ಕೊಠಡಿಯಲ್ಲಿ ಕುಳಿತು ಸಂಜೆ 4-30ರ ತನಕ ಕಾಲ ಕಳೆಯುವುದು.ಇದಾದ ಬಳಿಕ ಮನೆಗೆ ಬರುವ ಬದಲು ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಸಂಜೆ 7ರಿಂದ ಗ್ರಾಮದಲ್ಲಿ ಪೋಷಕರು,ವಿದ್ಯಾರ್ಥಿಗಳ ಸಭೆ ನಡೆಸಿ ಶಾಲೆಗೆ ಮಕ್ಕಳನ್ನು ಕಳುಹಿಸಿ,ಇಲ್ಲವಾದರೇ ನೀವು ಎಲ್ಲಿ ಸೂಚಿಸುತ್ತೀರಾ ಅಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತೇನೆ ಎಂದು ಶಿಕ್ಷಕರು ಮನವಿ ಮಾಡಿದರು ಸಹ ಪೋಷಕರಿಂದ ಸ್ಪಂದನೆ ದೊರೆಯುತ್ತಿಲ್ಲ.
ತಾಲೂಕಿನ ಅರಸೀಕಟ್ಟೆ ಕಾವಲ್ ಸರ್ವೇನಂಬರ್ 116ರಲ್ಲಿ ಈ ಹಿಂದೆಯೇ ಖಾಸಗಿ ಒಡೆತನದಲ್ಲಿ ಕ್ರಷರ್ ಕಾರ್ಯನಿರ್ವಹಿಸುತ್ತಿದೆ.ಇದರೊಂದಿಗೆ ಮುದಗನೂರು ಕಾವಲ್ನಲ್ಲಿಯೂ ಕೂಡ ಮತ್ತೊಂದು ಕ್ರಷರ್ ನಡೆಯುತ್ತಿದೆ.ಈ ಭಾಗದಲ್ಲಿನ ಸರಕಾರಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡೆಗಳು ಇರುವ ಕಾರಣ ಮತ್ತೊಂದು ಕ್ರಷರ್ಗೆ ಅನುಮತಿ ನೀಡಲಾಗಿದೆ.ಈ ಭಾಗದಲ್ಲಿಯೂ ಕೂಡ ಸರಕಾರಿ ಶಾಲೆಗಳು,ಜನವಸತಿ ಪ್ರದೇಶಗಳು ಇದ್ದು,ಇದುವರೆಗೂ ಯಾವುದೇ ಆಕ್ಷೇಪಣೆ ಹಳೆಯ ಎರಡು ಕ್ರಸರ್ಗಳಿಗೆ ಬಂದಿಲ್ಲ.ಈ ಇಬ್ಬರು ಮಾಲೀಕರು ಪ್ರಭಾವಿಗಳಾಗಿರುವ ಕಾರಣ ಇವರ ಕಲ್ಲುಗಣಿಗಾರಿಗಳಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತಿದ್ದರೂ ಕೂಡ ಜನರು ಇವರ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗಿಲ್ಲ.
ನೆಹರುನಗರ ಸಮೀಪದ ಅರಸೀಕಟ್ಟೆ ಕಾವಲ್ ನಲ್ಲಿ ನೂತನವಾಗಿ ಕಲ್ಲುಗಣಿಗಾರಿಕೆ ಆರಂಭಿಸುತ್ತಿರುವ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು,ಈತ ಸರಕಾರದಿಂದ ಸಕಲರೀತಿಯಲ್ಲಿ ಅನುಮತಿ ಪಡೆದು ಕ್ರಷರ್ ಆರಂಭಿಸುವ ಸಲುವಾಗಿ ಸಿದ್ಧತೆಯೊಂದಿಗೆ ಕಲ್ಲುಗಣಿಗಾರಿಕೆ ನಡೆಸಲು ಪ್ರಾಯೋಗಿಕ ಸಿದ್ಧತೆಯಲ್ಲಿ ತೊಡಗಿದ್ದಾರೆ.ಇದನ್ನು ಸಹಿಸದ ಇತರೆ ಎರಡು ಕ್ರಷರ್ ಗಳ ಮಾಲೀಕರು ಪ್ರಭಾವಿ ಕೋಮಿನವರಾಗಿದ್ದು,ದಲಿತರು ಆರ್ಥಿಕವಾಗಿ ಬೆಳೆಯುತ್ತಾರೆ ಎಂಬುದನ್ನು ಸಹಿಸದೇ ಕ್ರಷರನ್ನು ತಡೆಯುವ ಸಲುವಾಗಿ ನೆಹರುನಗರದ ದಲಿತ ಸಮುದಾಯದವರನ್ನೆ ಎತ್ತಿಕಟ್ಟಿ ನೂತನ ಕ್ರಷರ್ ಸ್ಥಗಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ದಲಿತ ಪರ ಸಂಘಟನೆಗಳ ಮುಖಂಡರ ಬಲವಾದ ಆರೋಪವಾಗಿದೆ.
ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಅನೇಕ ಬಾರಿ ನೆಹರುನಗರ ಪೋಷಕರಲ್ಲಿ ಮನವಿ ಮಾಡಲಾಗಿದೆ.ಆದರೆ ಅವರಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ.ಶಾಲೆಗೆ ಮಕ್ಕಳು ಗೈರಾಗುತ್ತಿರುವ ಬಗ್ಗೆ ತಾಲೂಕು ಆಡಳಿತ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ.ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಮುಂದಿನ ಕ್ರಮವಹಿಸಲಾಗುವುದು.
– ಕೆ.ಪಿ.ನಾರಾಯಣ,ಬಿಇಒ,ಅರಕಲಗೂಡು.ನೀಡಿದ್ದರೂ ಕೂಡ ಯಾವುದೇ ಇಲಾಖೆ ಸ್ಪಂಧಿಸಿಲ್ಲ.ಅಂತಿಮವಾಗಿ ಶಿಕ್ಷಣ ಇಲಾಖೆಯನ್ನು ಅಸ್ತ್ರವಾಗಿ ಮಾಡಿಕೊಂಡು ಖಾಸಗಿ ಕರ್ಷರ್ ಸ್ಥಳಾಂತರ ಮಾಡುವತನಕ ಮಕ್ಕಳನ್ನು ಶಾಲೆಗೆ ಕಳಿಸದೇ ಹಠಕ್ಕೆ ಬಿದ್ದಿದ್ದಾರೆ.
ಈಗಾಗಲೇ ತಾಲೂಕು ಆಡಳಿತ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು,ವಿದ್ಯಾರ್ಥಿಗಳ ಪೋಷಕರು,ಗ್ರಾಮಸ್ಥರು,ರೈತ ಸಂಘ,ವಿವಿಧ ಸಂಘಟನೆಗಳ ಸಮ್ಮುಖಗದಲ್ಲಿ ಸಭೆ ನಡೆಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಡುವುದು ಬೇಡ ಮೊದಲು ಮಕ್ಕಳನ್ನು ಶಾಲೆಗೆ ಕಳುಹಿಸಿ,ಕ್ರಷರ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕ್ರಮವಹಿಸುವರು ಎಂಬುದಾಗಿ ಚರ್ಚೆ ನಡೆಸಲಾಗಿದೆ.ಮಕ್ಕಳು ಶಾಲೆಗೆ ಬರುವ ವಿಶ್ವಾಸವಿದೆ.
ಕೆ.ಸಿ.ಸೌಮ್ಯ,ತಹಸೀಲ್ದಾರ್,ಅರಕಲಗೂಡು.
