ಹಾಸನ: ಅರಕಲಗೂಡು ತಾಲ್ಲೂಕಿನ ಅರೇಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದಲ್ಲಿ ಫೆ. 25 ಮತ್ತು 26ರಂದು ಉತ್ತರಾಧಿಕಾರಿಗಳಿಗೆ ಸನ್ಯಾಸ ದೀಕ್ಷೆ, ಶಿಷ್ಯ ಸ್ವೀಕಾರ ಸಮಾರಂಭ ಹಾಗೂ ಧಾರ್ಮಿಕ ಮಹಾಸಭೆ ಜರುಗಲಿವೆ ಎಂದು ಹರೀಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉತ್ತರಾಧಿಕಾರಿಗಳು ಸಂಸ್ಕೃತ ಅಧ್ಯಯನದಲ್ಲಿ ಪ್ರಾವೀಣ್ಯ ಹೊಂದಿದ್ದು, ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಹಿಮಾಲಯದ ಹೃಷಿಕೇಷದಲ್ಲಿನ ದಯಾನಂದ ಸರಸ್ವತಿಯವರ ಆಶ್ರಮದಲ್ಲಿ ವೇದಾಂತ ಅಭ್ಯಾಸ ಮಾಡಿದ್ದಾರೆ ಎಂದರು.
ಫೆ. 25ರ ಬುಧವಾರ ಬೆಳಿಗ್ಗೆ ಶ್ರೀಮಠದಲ್ಲಿ ದಶವಿಧ ಸ್ನಾನ, ಅಷ್ಟ ಶ್ರದ್ಧಾದಿ ಕಾರ್ಯಗಳು, ವಿರಜಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ನಡೆಯಲಿವೆ. ಫೆ. 26ರ ಗುರುವಾರ ರಾಮನಾಥಪುರದ ಕಾವೇರಿ ನದಿಯಲ್ಲಿ ಸನ್ಯಾಸ ದೀಕ್ಷೆ ನೆರವೇರಲಿದ್ದು, ನಂತರ ಜಗದ್ಗುರು ಶ್ರೀ ಸುಜ್ಞಾನಪ್ರಭು ಮಹಾಸ್ವಾಮಿ ಭಗವದ್ದಾದಂಗಳವರ ಸಮಾಧಿಸ್ಥ ಅಧಿಷ್ಠಾನದಲ್ಲಿ ಶಿಷ್ಯ ಸ್ವೀಕಾರ ಹಾಗೂ ಮಹಾವಾಕ್ಯೋಪದೇಶ ಕಾರ್ಯಕ್ರಮಗಳು ಜರುಗಲಿವೆ.
ಧಾರ್ಮಿಕ ಮಹಾಸಭೆಗೆ ಯತಿಶ್ರೇಷ್ಠರಾದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ವಿವಿಧ ಮಠಾಧೀಶರು, ಸನ್ಯಾಸಿಗಳು ಹಾಗೂ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ, ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದ ಶ್ರೇಯಸ್ ಎಂ. ಪಟೇಲ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸಲಿದ್ದು, ಸಭೆಯ ಉದ್ಘಾಟನೆಯನ್ನು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೆರವೇರಿಸಲಿದ್ದಾರೆ ಎಂದರು.
