ಅರಕಲಗೂಡು: ಭಾರತ ದೇಶ ಪ್ರಪಂಚದಲ್ಲಿ ಆರ್ಥಿಕವಾಗಿ ಬೆಳೆಯುತ್ತಿರುವುದರಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತಿದೆ. ಇಂತಹ ಸುಸಂದರ್ಭದಲ್ಲಿ ರಾಜ್ಯ ಸರಕಾರದ ನಿರುದ್ಯೋಗ ಸಮಸ್ಯೆ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೃಹತ್ ಪ್ರತಿಭಟನೆಗೆ ಮುಂದಾಗಿರುವುದಲ್ಲದೆ ವಿಧಾನಸೌಧಕ್ಕೂ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವುದು ರಾಜ್ಯ ಸರಕಾರದ ಜನವಿರೋಧಿ ನೀತಿಗೆ ಸಾಕ್ಷಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎಂದರು.
ಗುರುವಾರ ತಾಲೂಕಿನ ಕೊಡಕಹಳ್ಳಿ ಗ್ರಾಮದಲ್ಲಿ ನೂತನಶ್ರೀಲಕ್ಷ್ಮೀದೇವಿ, ಮಾರಮ್ಮ ದೇವಿ, ಗ್ರಾಮದೇವತೆ ಪ್ರತಿಷ್ಠಾಪನೆ ಹಾಗೂ ದೇವಸ್ಥಾನಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧಾರವಾಡದಲ್ಲಿ ಲಕ್ಷಾಂತರರೂ ವ್ಯಯಮಾಡಿ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಕೇವಲ ತರಬೇತಿ ದೊರೆಯುತ್ತಿದೆ ವಿನಃ ಉದ್ಯೋಗ ನೀಡುವ ಕೆಲಸ ಕಳೆದ ಎರಡೂವರೆ ವರ್ಷಗಳಿಂದಲೂ ಆಗಿಲ್ಲ. ಇದನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರಕಾರಕ್ಕೆ ವಾರ ಕಾಲ ಗಡುವು ನೀಡಿದ್ದು, ಮುಂದೆ ವಿದ್ಯಾರ್ಥಿಗಳ ಹೋರಾಟ ಮತ್ಯಾವ ಸ್ವರೂಪ ಪಡೆದುಕೊಳ್ಳುವುದು ಎಂಬುದನ್ನು ಕಾದು ನೋಡಬೇಕಿದೆ. ಈಗಾಲಾದರೂ ಸರಕಾರ ಎಚ್ಚೆತ್ತುಕೊಂಡು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ ಎಂದರು.
ಮಕ್ಕಳಿಗೆ ವಿದ್ಯೆ ನೀಡುವುದು ಸರಕಾರದ ಮೊದಲ ಕರ್ತವ್ಯವಾಗಿದೆ. ಆದರೆ ಶಿಕ್ಷಣ ಇಲಾಖೆಯೊಂದರಲ್ಲಿಯೇ ಸುಮಾರು 76 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು, ಇನ್ನೂ ಕೂಡ ನೇಮಕಾತಿ ಮಾಡಿಲ್ಲ, ಹೀಗಿರುವಾಗ ನಮ್ಮ ಸರಕಾರಿ ಶಾಲೆಗಳ ಸ್ಥಿತಿ ಹೇಳತೀರದು.
ಉಳಿದಂತೆ ಎಲ್ಲಾ ಇಲಾಖೆಗಳಲ್ಲಿಯೂ ಕೂಡ 1ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಕಳೆದ ಮೂರು ವರ್ಷದಿಂದ ಈ ಸರ್ಕಾರ ಒಂದು ಕೆಲಸ ಕೊಡಲಿಲ್ಲ.ಯುವಕರು ನಮ್ಮ ಮನೆ ಬಾಗಿಲಿಗೆ ಬಂದಾಗ ತುಂಬಾ ಮನಸ್ಸಿಗೆ ನೋವಾಗುತ್ತೆ ಎಂದರು.

ಗ್ಯಾರಂಟಿ ಹೆಸರಿನಲ್ಲಿ ಖಜಾನೆ ಲೂಟಿ : ರಾಜ್ಯದ ಆರೂವರೇ ಕೋಟಿ ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರಕಾರ ಲೂಟಿ ಮಾಡುತ್ತಿದೆ. ಆದರೆ ಅಭಿವೃದ್ಧಿ ಮಾತ್ರ ಸೂನ್ಯವಾಗಿದೆ. ಹಣದ ದುಂದುಗಾರಿಕೆ ಆಗುತ್ತಿದೆ, ಲೂಟಿ ಆಗುತ್ತಿದೆ.
ಸರ್ಕಾರದಲ್ಲಿ ವರ್ಗಾವಣೆ ದಂಧೆ, ಅಕ್ರಮಗಳು ನಡೆಯುತ್ತಿವೆ. ಐದು ಗ್ಯಾರೆಂಟಿ ಕೊಟ್ಟಿದ್ದೀವಿ ಅಂತಾರೆ. ಎರಡು ಸಾವಿರವನ್ನು ನಿಮ್ಮ ಮೇಲೆ ಸಾಲ ಹೊರಸಿ ಕೊಡ್ತಿದ್ದಾರೆ. ಅವರೇನು ಮನೆಯಿಂದ ತಂದು ಕೊಡ್ತಿಲ್ಲ. ಚುನಾವಣೆ ಗೆಲ್ಲಲು ನಿಮ್ಮ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದಾರೆ, ಯಾವುದೇ ಅಭಿವೃದ್ಧಿ ಕಾಣುತ್ತಿಲ್ಲ. ಇದನ್ನು ನೀವು ಸೂಕ್ಷ್ಮವಾಗಿ ಗಮನಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ತಾತ್ಕಾಲಿಕ ಖುಷಿ ಕೊಡ್ತಿದ್ದಾರೆ. ಯಾವುದೇ ರಾಜ್ಯದ ಚುನಾವಣೆ ಆದರೂ ಐದು ಸಾವಿರ ಕೊಡ್ತಿವಿ ಅಂತಾರೆ. ಇದು ಬಹಳ ದಿನ ನಡೆಯಲ್ಲ, ರಾಜ್ಯ ಬರಬಾದ್ ಆಗುತ್ತದೆ. ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು.

Leave a Reply

Your email address will not be published. Required fields are marked *