ಹಾಸನ: ಅರಸೀಕೆರೆ ಹೋಬಳಿ ಗಂಗೇಮಡುವು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕ ಗುರುಪೀಠ ಶಾಖಾ ಮಠದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ, ಈ ಮಠವು ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ದುದ್ದ ಹೋಬಳಿಯ ಹರಿಹರಪುರದಲ್ಲಿ ನಡೆದ ನೂತನ ದೇವಾಲಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಶಿವಾನಂದಪುರಿ ಸ್ವಾಮೀಜಿಗಳ ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರ ಸಹಕಾರದಿಂದ ಮಠದ ನಿರ್ಮಾಣ ಕಾರ್ಯಗಳು ವೇಗವಾಗಿ ಸಾಗುತ್ತಿವೆ ಎಂದು ತಿಳಿಸಿದರು.
ಮಠ ನಿರ್ಮಾಣವು ಕೇವಲ ಕಟ್ಟಡ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಅದು ಸಮಾಜದ ಏಕತೆ, ಶಕ್ತಿ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಮಹತ್ವದ ಚಳವಳಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಠದ ಸಮಗ್ರ ಅಭಿವೃದ್ಧಿಗೆ ಹಾಸನ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಅವರು ಸಲ್ಲಿಸುತ್ತಿರುವ ಶ್ರಮ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ ಅವರು, ಸಮಾಜದ ಮುಖಂಡರಾಗಿ ಅವರು ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಶುಭ ಹಾರೈಸಿದರು.
2019ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕನಕ ಗುರುಪೀಠಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಂತರ ಸುಮಾರು 30 ಎಕರೆ ಪ್ರದೇಶದಲ್ಲಿ ಕನಕ ನೌಕರರ ಸಂಘದ ಸಹಕಾರದೊಂದಿಗೆ ಮಠದ ಕಟ್ಟಡ ನಿರ್ಮಾಣ ಆರಂಭಗೊಂಡಿದ್ದು, ಮುಖ್ಯಮಂತ್ರಿ ವಿಶೇಷ ಅನುದಾನದಿಂದ ರಸ್ತೆ ನಿರ್ಮಾಣ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಸಹಕಾರದಿಂದ ಸಮುದಾಯ ಭವನ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ ಎಂದು ವಿವರಿಸಿದರು.
ಮುಜರಾಯಿ ಇಲಾಖೆಯಿಂದ ಶ್ರೀ ಗಂಗಾಧರೇಶ್ವರ ದೇವಾಲಯದ ಪುನರ್ ನಿರ್ಮಾಣ ಕಾರ್ಯವೂ ಕೈಗೊಳ್ಳಲಾಗುತ್ತಿದೆ. ಗೊಲ್ಲರಳ್ಳಿ ಗೇಟ್ ಸಮೀಪ ನಿರ್ಮಾಣಗೊಳ್ಳುತ್ತಿರುವ ಕನಕ ಗುರುಪೀಠವು ಮುಂದಿನ ದಿನಗಳಲ್ಲಿ ಕುರುಬ ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಠದ ಅಭಿವೃದ್ಧಿಗೆ ವೈಯಕ್ತಿಕವಾಗಿ ಮುಂದಾಗುವ ಭರವಸೆ ನೀಡಿರುವುದು ಕುರುಬ ಸಮಾಜಕ್ಕೆ ಹೊಸ ಆತ್ಮವಿಶ್ವಾಸ ತುಂಬಿದೆ ಎಂದು ಹೇಳಿದರು. ಇದು ಸಮಾಜದ ಏಕತೆ ಮತ್ತು ಭವಿಷ್ಯದ ಪೀಳಿಗೆಗೆ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರದ ಅನುದಾನ, ಜನಪ್ರತಿನಿಧಿಗಳ ಸಹಕಾರ ಮತ್ತು ಸಮಾಜದ ಒಗ್ಗಟ್ಟಿನಿಂದ ಕನಕ ಗುರುಪೀಠವು ರಾಜ್ಯ ಮಟ್ಟದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕೇಂದ್ರವಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಸಮಾಜದ ಮುಖಂಡರು, ಯುವಕರು ಹಾಗೂ ಭಕ್ತರು ಮಠ ನಿರ್ಮಾಣ ಕಾರ್ಯಕ್ಕೆ ಸಕ್ರಿಯವಾಗಿ ಕೈಜೋಡಿಸುವಂತೆ ಕರೆ ನೀಡಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯದಲ್ಲಿ ಜನಿಸಿ ಎಂದು ಹಿಡಿ ರಾಜ್ಯವಲ್ಲದೆ ದೇಶದಲ್ಲಿ ಕೂಡ ಉತ್ತಮ ಆಡಳಿತವನ್ನು ನೀಡುತ್ತಿದ್ದಾರೆ.
ಅಂತಹ ಸಮಾಜದ ವತಿಯಿಂದ ನಿರ್ಮಾಣವಾಗುತ್ತಿರುವ ಮಠದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಮುಖಂಡರಾದ ಶ್ರೀಧರ್ ಗೌಡ, ಕೆಪಿಸಿಸಿ ಸದಸ್ಯ ಹೊನ್ನಿಕೊಪ್ಪಲು ಮಂಜೇಗೌಡ, ಪ್ರಸನ್ನ ಕುಮಾರ್, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ಅನೇಕ ಗಣ್ಯರು, ಸಮಾಜದ ಮುಖಂಡರು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
