ಅರಸೀಕೆರೆ: ದೇಶದ ಬೆನ್ನೆಲುಬಾಗಿರುವ ರೈತನ ಕೃಷಿ ಹಾಗೂ ಹೈನುಗಾರಿಕೆಯನ್ನು ಬೆಳೆಸಬೇಕಾದ ಸರ್ಕಾರ, ಅವುಗಳನ್ನು ನಾಶದ ಹಾದಿಗೆ ಕೊಂಡೊಯ್ಯುವ ನೀತಿಗಳನ್ನು ಅನುಸರಿಸಬಾರದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಮೇ 10ರಂದು ರಾಜ್‌ಘಾಟ್ನಲ್ಲಿ ಮಹಾತ್ಮ ಗಾಂಧೀಜಿ ಸಮಾಧಿ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಈ ಮೂಲಕ ದೇಶದ ಜನತೆ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶ ಎಂದು ಹೇಳಿದರು.

ಭಾರತ ಸರ್ಕಾರ ಅಮೆರಿಕದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳು ಕೃಷಿ ಹಾಗೂ ಹೈನುಗಾರಿಕಾ ಕ್ಷೇತ್ರಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ ಎಂದು ಆರೋಪಿಸಿದರು. ಕೇಂದ್ರದ ಸಚಿವರು ಮತ್ತು ಪ್ರಧಾನಮಂತ್ರಿ ಕೃಷಿ, ಹೈನುಗಾರಿಕೆಗೆ ಯಾವುದೇ ಅಪಾಯವಿಲ್ಲ ಎಂದು ಹೇಳುತ್ತಿದ್ದರೂ, ವಾಷಿಂಗ್ಟನ್‌ನಲ್ಲಿ ನಡೆದ ಒಪ್ಪಂದಗಳ ವಿವರಗಳು ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸರ್ಕಾರ ಹೇಳುವುದೊಂದು, ವಾಸ್ತವ ಸ್ಥಿತಿಯೊಂದು ಎಂಬಂತಾಗಿದೆ ಎಂದು ಟೀಕಿಸಿದರು.

ಅಮೆರಿಕದ ಬಳಿ ಅಪಾರ ಪ್ರಮಾಣದಲ್ಲಿ ಹಾಲು ಮತ್ತು ಹಾಲು ಉತ್ಪನ್ನಗಳ ಸಂಗ್ರಹವಿದ್ದು, ಅವುಗಳಿಗೆ ಮಾರುಕಟ್ಟೆ ಹುಡುಕುವ ಉದ್ದೇಶದಿಂದ ಭಾರತವನ್ನು ಗುರಿಯಾಗಿಸಲಾಗುತ್ತಿದೆ. ಚೀನಾದ ನಂತರ ಭಾರತವೇ ದೊಡ್ಡ ಮಾರುಕಟ್ಟೆಯಾಗಿರುವುದರಿಂದ, ಕಡಿಮೆ ಬೆಲೆಗೆ ಹಾಲು ಉತ್ಪನ್ನಗಳನ್ನು ರಫ್ತು ಮಾಡುವ ಪ್ರಯತ್ನ ನಡೆಯುತ್ತಿದೆ. ಅಮೆರಿಕದಿಂದ ಹಾಲು ಉತ್ಪನ್ನಗಳು ದೇಶಕ್ಕೆ ಪ್ರವೇಶಿಸಿದರೆ ಒಂದು ವರ್ಷದೊಳಗೆ ದೇಶೀಯ ಹೈನುಗಾರಿಕೆ ಸಂಪೂರ್ಣವಾಗಿ ನಾಶವಾಗುವ ಭೀತಿ ಇದೆ ಎಂದು ಎಚ್ಚರಿಸಿದರು.

ಅಮೆರಿಕದ ಹಾಲು ಉತ್ಪಾದನಾ ಪದ್ಧತಿ ಭಾರತೀಯ ಸಂಸ್ಕೃತಿ ಹಾಗೂ ಆಹಾರ ಪದ್ಧತಿಗೆ ವಿರುದ್ಧವಾಗಿದೆ. ಹಾಲು ಕೊಡುವುದನ್ನು ನಿಲ್ಲಿಸಿದ ಹಸುಗಳನ್ನು ಕಸಾಯಿಖಾನೆಗೆ ಅಥವಾ ಪಶು ಆಹಾರ ಉತ್ಪಾದನೆಗೆ ಬಳಸಲಾಗುತ್ತದೆ. ಇಂತಹ ವ್ಯವಸ್ಥೆಯಿಂದ ಬಂದ ಹಾಲು ಹಾಗೂ ಉತ್ಪನ್ನಗಳು ಭಾರತೀಯರಿಗೆ ಯೋಗ್ಯವಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಮೆರಿಕದಿಂದ ಜನ್ಯಮಾರ್ಪಿತ (ಜಿಎಂ) ಆಹಾರ ಪದಾರ್ಥಗಳನ್ನು ಭಾರತಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಇಂತಹ ಆಹಾರ ಮಾನವ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅಮೆರಿಕದ ಜನರೇ ಅದನ್ನು ಸೇವಿಸಲು ಹಿಂಜರಿಯುತ್ತಿದ್ದಾರೆ. ಹಾಗಿರುವಾಗ ಭಾರತೀಯರು ಅದನ್ನು ಒಪ್ಪಿಕೊಳ್ಳಬಾರದು ಎಂದು ಮನವಿ ಮಾಡಿದರು.

ಸರ್ಕಾರ ಒಪ್ಪಿದರೂ ಜವಾಬ್ದಾರಿಯುತ ಪ್ರಜೆಗಳಾದ ನಾವು ಇದನ್ನು ವಿರೋಧಿಸಬೇಕು. ಕೃಷಿ, ಹೈನುಗಾರಿಕೆ ಮತ್ತು ದೇಶದ ನಾಗರಿಕರನ್ನು ಉಳಿಸಲು ಪ್ರತಿಭಟನೆ ಅನಿವಾರ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃಷಿ ರಕ್ಷಣೆಗೆ ಸ್ಪಷ್ಟ ನಿಲುವು ತೆಗೆದುಕೊಂಡು ಅಮೆರಿಕಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈ ನೀತಿಗಳಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ, ತಾಲೂಕಿನ ಹಿರಿಯ ರೈತ ಹೋರಾಟಗಾರರಾದ ಚಿಕ್ಕೂರು ಮೂರ್ತಿ, ಹಿರಿಯೂರು ಸಿದ್ದಪ್ಪ, ಮೇನೇನಳ್ಳಿ ಸ್ವಾಮಿ, ಬಾಲು, ಜಯರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *