ಹಾಸನ: ನಗರದ ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಫೆ. 3ರ ಮಂಗಳವಾರ ಬೆಳಗಿನ ಜಾವ 5:40ಕ್ಕೆ pdjadmnhassan@gmail.com ಇಮೇಲ್ ವಿಳಾಸಕ್ಕೆ Rameeza Hussain rameeza-hussain@hotmail.com ಎಂಬ ಐಡಿಯಿಂದ ಸಂದೇಶ ಕಳುಹಿಸಲಾಗಿದ್ದು, ಬೆಳಿಗ್ಗೆ 11:50ಕ್ಕೆ ನ್ಯಾಯಾಲಯ/ನ್ಯಾಯಾಧೀಶರ ಕೊಠಡಿಯಲ್ಲಿ ಸೈನೈಡ್ ವಿಷಾನಿಲ ತುಂಬಿದ ಆರ್‌ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳುತ್ತದೆ. ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ನಿರಪರಾಧಿ ನಾಗರಿಕನನ್ನು ಸ್ಥಳಾಂತರಿಸಬೇಕು ಎಂಬ ಬೆದರಿಕೆ ಬರಹಗಳಿದ್ದವು. ಜೊತೆಗೆ 26/11 ಮುಂಬೈ ಭಯೋತ್ಪಾದಕ ದಾಳಿ ಹಾಗೂ ಅಜ್ಮಲ್ ಕಸಬ್ ಪ್ರಕರಣದ ಉಲ್ಲೇಖಗಳನ್ನೂ ಮಾಡಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ DAR ಡಿವೈಎಸ್‌ಪಿ ಪಾಲಾಕ್ಷ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಿದರು. ಸಮಗ್ರ ತಪಾಸಣೆ ನಡೆಸಿದರೂ ಯಾವುದೇ ಬಾಂಬ್ ಅಥವಾ ಅನುಮಾನಾಸ್ಪದ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ.
