ಹಾಸನ: ನಿಧಾನವಾಗಿ ಹೋಗು ಎಂದು ಹೇಳಿದ ಕಾರಣಕ್ಕೆ ಯುವಕನೊಬ್ಬನನ್ನು ಕಾರಿನಿಂದ ಗುದ್ದಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಳೆನರಸೀಪುರ ಸಮೀಪದ ಸೂರನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಮನು (27) ಮೃತಪಟ್ಟ ಯುವಕನಾಗಿದ್ದು ಮನೆ ಮುಂದೆ ಸಂಬಂಧಿಕರಾದ ಅಭಿಷೇಕ್, ರಾಕೇಶ್, ಕುಶಾಲ್ ಜೊತೆಗೆ ಮಾತನಾಡುತ್ತಾ ನಿಂತಿದ್ದ.
ಈ ವೇಳೆ KA-01-MF-2883 ಸಂಖ್ಯೆಯ ಕಾರು ಅತಿ ವೇಗದಲ್ಲಿ ಬಂದಿದ್ದು, ಅದನ್ನು ಗಮನಿಸಿದ ಮನು ಹಾಗೂ ಅಭಿಷೇಕ್ ನಿಧಾನವಾಗಿ ಹೋಗುವಂತೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಚಾಲಕ ಸ್ವಲ್ಪ ದೂರ ಹೋಗಿ ಕಾರನ್ನು ತಿರುಗಿಸಿಕೊಂಡು ಬಂದು ಮಾತನಾಡುತ್ತ ನಿಂತಿದ್ದ ಯುವಕರ ಮೇಲೆ ಗುದ್ದಿದ್ದಾನೆ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸಕ್ಕೆ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಭಿಷೇಕ್ ಹಾಗೂ ರಾಕೇಶ್‌ಗೆ ಗಂಭೀರ ಗಾಯಗಳಾಗಿದ್ದು, ಕುಶಾಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಳಿಕ ಕಾರು ನಿಲ್ಲಿಸದೇ ಆರೋಪಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
