ಹಾಸನ: ಮನೆಯಲ್ಲಿ ಮಕ್ಕಳ ನಗು ಮತ್ತು ತುಂಟಾಟವಿದ್ದರೆ ಆ ಸಂಭ್ರಮವೇ ಬೇರೆ. ಆದರೆ ಇಂದು ಸಂತಾನ ಭಾಗ್ಯವಿಲ್ಲದೆ ಅಥವಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಫಲ ಕಾಣದೆ ನೊಂದಿರುವ ದಂಪತಿಗೆ ಹೊಸ ಆಶಾಕಿರಣ ಮೂಡಿಸಲು ಹಾಸನ ಜಿಲ್ಲಾಡಳಿತ ಮುಂದಾಗಿದೆ.

ಸರ್ಕಾರ ಜಾರಿಗೆ ತಂದಿರುವ ಕಾನೂನುಬದ್ಧ ಮತ್ತು ಸುಲಭವಾದ ದತ್ತು ಸ್ವೀಕಾರ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ಇದೇ ಸೋಮವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾಲಯ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ‘ದತ್ತು ಸ್ವೀಕಾರ ಮಾಹಿತಿ ಕಾರ್ಯಾಗಾರ’ ಹಾಗೂ ‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನವು ಮಾರ್ಚ್ 16ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ (ಕಲಾಭವನ) ಜರುಗಲಿದೆ.

ದತ್ತು ಪ್ರಕ್ರಿಯೆಯ ಕುರಿತಾದ ಕಾನೂನು ಕ್ರಮಗಳು ಮತ್ತು ಗೊಂದಲಗಳಿಗೆ ಈ ಕಾರ್ಯಾಗಾರದಲ್ಲಿ ತಜ್ಞರು ಉತ್ತರ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ಪ್ರಸ್ತುತಪಡಿಸುವ ‘ತಾಯಿಯಾಗುವುದೆಂದರೆ’ ಎಂಬ ಏಕವ್ಯಕ್ತಿ ರಂಗಪ್ರಯೋಗವು ಪ್ರದರ್ಶನಗೊಳ್ಳಲಿದೆ. ದತ್ತು ಪ್ರಕ್ರಿಯೆ ಮತ್ತು ಮಾತೃತ್ವದ ಭಾವನಾತ್ಮಕ ಅಂಶಗಳನ್ನು ಈ ನಾಟಕವು ಪರಿಣಾಮಕಾರಿಯಾಗಿ ತೆರೆದಿಡಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಲತಾ ಕುಮಾರಿ ಕೆ.ಎಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ಜಿಲ್ಲಾ ಪಂಚಾಯತ್ ಸಿಇಒ ಪೂರ್ಣಿಮಾ ಹಾಗೂ ನ್ಯಾಯಮೂರ್ತಿ ದಾಕ್ಷಾಯಿಣಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದು, ದತ್ತು ಪ್ರಕ್ರಿಯೆಯ ಕುರಿತಾದ ಕಾನೂನು ಕ್ರಮಗಳು ಮತ್ತು ಗೊಂದಲಗಳಿಗೆ ಸ್ಪಷ್ಟನೆ ನೀಡಲಿದ್ದಾರೆ.

ದತ್ತು ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ಬಯಸುವ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾನೂನುಬದ್ಧವಾಗಿ ಮಗುವಿನ ನಗುವನ್ನು ತಮ್ಮ ಮನೆಯಲ್ಲಿ ತುಂಬಿಸಿಕೊಳ್ಳಲು ಜಿಲ್ಲಾಡಳಿತ ಆಹ್ವಾನಿಸಿದೆ.

ರಂಗಭೂಮಿ ಕಲಾವಿದೆ ಪೂಜಾ ರಘುನಂದನ್ ಪ್ರಸ್ತುತಪಡಿಸುವ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ನಾಟಕವು ಕೇವಲ ಕಾಲ್ಪನಿಕ ಕಥೆಯಲ್ಲ; ಇದು ಅವರ ಜೀವನದ ಕಹಿ-ಸಿಹಿ ಘಟನೆಗಳ ದರ್ಶನ. ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕವು, ಸಮಾಜದಲ್ಲಿ ‘ತಾಯಿ’ ಎಂಬ ಪದಕ್ಕೆ ಇರುವ ಸಾಂಪ್ರದಾಯಿಕ ಅರ್ಥವನ್ನು ವಿಸ್ತರಿಸುತ್ತದೆ. “ಹೆಣ್ಣು ತಾಯಿಯಾಗುವುದು ಕೇವಲ ಹೆರಿಗೆಯಿಂದಲ್ಲ, ಪ್ರೀತಿಯಿಂದ” ಎಂಬ ಶ್ರೇಷ್ಠ ಸಂದೇಶ ಸಾರುವ ಈ ನಾಟಕವು ಈಗಾಗಲೇ ರಾಜ್ಯದಾದ್ಯಂತ ಪ್ರದರ್ಶನಗೊಂಡು ಸಾವಿರಾರು ಜನರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಕಾನೂನುಬದ್ಧವಾಗಿ ದತ್ತು ಪಡೆಯುವಲ್ಲಿ ಇರುವ ಸವಾಲುಗಳು ಹಾಗೂ ಆ ಪ್ರಕ್ರಿಯೆ ಮುಗಿದ ನಂತರ ದಂಪತಿಗಳು ಪಡೆಯುವ ನೆಮ್ಮದಿಯನ್ನು ಈ ರಂಗಪ್ರಯೋಗವು ಕಟ್ಟಿಕೊಡುತ್ತದೆ.

Leave a Reply

Your email address will not be published. Required fields are marked *