ನವದೆಹಲಿ: ಇಲ್ಲಿನ ಸಂಸತ್ ಭವನದಲ್ಲಿರುವ ಗ್ರಂಥಾಲಯಕ್ಕೆ ಸಂಸದ ಶ್ರೇಯಸ್ ಪಟೇಲ್ ಅವರು ಭೇಟಿ ನೀಡಿ ಸಂಸದರಾಗಿ ಸೇವೆ ಸಲ್ಲಿಸಿರುವ ಗಣ್ಯರ ಕುರಿತು ದಾಖಲಾಗಿರುವ ಮಾಹಿತಿಗಳನ್ನು ಓದಿದರು.
13ನೇ ಲೋಕಸಭೆ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದ ಸಂಸದರ ತಾತ ದಿ. ಪುಟ್ಟಸ್ವಾಮಿಗೌಡ ಅವರ ಕುರಿತು ಸಂಗ್ರಹವಾಗಿರುವ ಮಾಹಿತಿಯನ್ನು ಓದಿದರು.
ಹೊಳೆನರಸೀಪುರದಂತಹ ಸಣ್ಣ ಪಟ್ಟಣದಿಂದ ರಾಜಕೀಯ ಪಯಣ ಆರಂಭಿಸಿದ ಪುಟ್ಟಸ್ವಾಮಿಗೌಡ ಅವರು ಜನಸೇವೆಯ ಮೂಲಕ ದೊಡ್ಡ ಗುರುತು ಮೂಡಿಸಿದ್ದಾರೆ. 1978 ರಿಂದ 1984ರ ವರೆಗೆ ಶಾಸಕರಾಗಿ ಸೇವೆ ಸಲ್ಲಿಸಿ ಬಳಿಕ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದರು.
1999ರಲ್ಲಿ ಹಾಸನ ಕ್ಷೇತ್ರದಿಂದ ಸಂಸದರಾಗಿಯೂ ಆಯ್ಕೆಯಾಗಿ ಜಿಲ್ಲೆಯನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದರು. ಅದರ ಜೊತೆಗೆ 1989 ರಿಂದ 1993ರವರೆಗೆ ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಸಚಿವರಾಗಿ ಸೇವೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಂಸದ ಶ್ರೇಯಸ್ ಪಟೇಲ್ ಅವರು, ಜನರ ಶ್ರೇಯೋಭಿವೃದ್ಧಿಯೇ ಅವರ ರಾಜಕೀಯದ ಗುರಿಯಾಗಿತ್ತು. ತಾತನವರು ತೋರಿದ ಸೇವಾ ಮನೋಭಾವ ಹಾಗೂ ಅಭಿವೃದ್ಧಿಯ ದಾರಿಯೇ ನನಗೆ ಪ್ರೇರಣೆ. ಅವರು ಹಾಕಿಕೊಟ್ಟ ಆ ಮಾರ್ಗದಲ್ಲಿ ಸಾಗುತ್ತೇನೆ ಎಂದಿದ್ದಾರೆ.
