ಬೇಲೂರು: ತಹಶೀಲ್ದಾರ್‌ ಶ್ರೀಧರ್‌ ಕಂಕಣವಾಡಿ ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಶಿರಸ್ತೇದಾರ್‌ ಒಬ್ಬರು ತಾಲ್ಲೂಕು ಕಚೇರಿಯಲ್ಲಿ ಮಾತ್ರೆ ಸೇವಿಸಿ ಆತಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಕಚೇರಿ ಶಿರಸ್ತೇದಾರ್‌ ತನ್ವೀರ್‌ ಅಹಮದ್‌ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಹಶೀಲ್ದಾರ್‌ ಅವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಹೆಚ್ಚುವರಿ ಕೆಲಸ ನೀಡುತ್ತಾರೆ. ಬೇರೆ ಸಿಬ್ಬಂದಿ ಇದ್ದರೂ ನನ್ನನ್ನೇ ಗುರಿಯಾಗಿಸಿಕೊಂಡಿದ್ದಾರೆ. ನನ್ನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಾರೆ. ಮಧುಮೇಹ ಮತ್ತಿತರ ಕಾಯಿಲೆಯಿಂದ ನಾನು ಬಳಲುತ್ತಿದ್ದರೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಯಾವ ತಪ್ಪು ಮಾಡದಿದ್ದರೂ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಆತಹತ್ಯೆಗೆ ಪ್ರಯತ್ನಿಸಿದ್ದೇನೆಂದು ತನ್ವೀರ್‌ ಅಹಮದ್‌ ಹೇಳಿದ್ದಾರೆ.

ಈ ಕುರಿತು ತಹಶೀಲ್ದಾರ್‌ ಶ್ರೀಧರ್‌ ಕಂಕಣವಾಡಿ ಮಾತನಾಡಿ, 2026ರ ಸಾಲಿನಲ್ಲಿ ಕೇಂದ್ರ ಸರ್ಕಾರವು ಜನಗಣತಿ ನಡೆಸಲು ನಿರ್ದೇಶನ ನೀಡಿದೆ. ಶಿರಸ್ತೇದಾರ್‌ ತನ್ವಿರ್‌ ಅಹಮದ್‌ ಅವರನ್ನು ಮೇಲ್ವಿಚಾರಣೆಗೆ ನೇಮಿಸಲಾಗಿದೆ ಹೊರತು ಹೆಚ್ಚು ಕೆಲಸ ನೀಡಿಲ್ಲ. ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಾರೆಂಬ ಕಾರಣಕ್ಕೆ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಇಲಾಖೆಯಿಂದ ನೀಡಿದ ಆದೇಶ ಪತ್ರವನ್ನು ಟೇಬಲ್‌ ಮೇಲಿಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು. ಅದಕ್ಕೆ ನಾನು ಲಿಖಿತ ರೂಪದಲ್ಲಿ ಕಾರಣ ನೀಡುವಂತೆ ಸೂಚಿಸಿದೆ. ಅಷ್ಟಕ್ಕೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೊರಗೆ ಹೋಗಿದ್ದಾರೆ. ಮಾತ್ರೆ ಸೇವಿಸಿದ ವಿಚಾರ ಗೊತ್ತಾಗಿ ನಾನೇ ಆಸ್ಪತ್ರೆಗೆ ದಾಖಲಿಸಿದ್ದೇನೆಂದರು.

Leave a Reply

Your email address will not be published. Required fields are marked *