ಹಾಸನ: ಅಪ್ರಾಪ್ತ ನಾದಿನಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ಹಾಗು ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕೆಂದು ಆದೇಶಿಸಿದೆ.
ಶ್ರವಣಬೆಳಗೊಳ ಹೋಬಳಿ ಕೋಡಿಬೆಳಗೊಳ ಗ್ರಾಮದ ಮಧು ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. 2023ರಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣ ಸಂಬಂಧ ಶ್ರವಣಬೆಳಗೊಳ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ತನ್ನ ಹೆಂಡತಿಯ ಚಿಕ್ಕಪ್ಪನ ಮಗಳಾದ 15 ವರ್ಷದ ಬಾಲಕಿ ಊರಿಗೆ ಬಂದಿದ್ದಳು. ಜಮೀನು ಕೆಲಸ ಹೆಚ್ಚಿದ್ದು ಮನೆಯವರೆಲ್ಲ ಕೆಲಸಕ್ಕೆ ಹೋಗುತ್ತಾರೆ. ಅಡುಗೆ ಸಹಾಯಕ್ಕಾಗಿ ಮಧು ಬಾಲಕಿಯನ್ನು ಕರೆದುಕೊಂಡು ಬಂದಿದ್ದ. ಮಧುಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ.
ಬಾಲಕಿಯನ್ನು ಹೆದರಿಸಿ ನಿರಂತರ ಅತ್ಯಾಚಾರ ಎಸಗಿದ್ದರಿಂದ ಆಕೆ ಗರ್ಭಿಣಿಯಾಗಿ ಮಗುವಿಗೆ ಜನ ನೀಡಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪೋಕ್ಸೋ ನ್ಯಾಯಾಧೀಶ ದೇವರಾಜು ಅವರು, ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಹಾಗು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಪ್ರಾಪ್ತೆ ಹಾಗು ಮಗುವಿನ ಪಾಲನೆಗಾಗಿ 7 ಲಕ್ಷ ರೂ.ಗಳನ್ನು ಸರ್ಕಾರ ನೀಡಬೇಕೆಂದು ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಶ್ರೀನಿವಾಸಗೌಡ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *