ಸಕಲೇಶಪುರ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ತಾಲ್ಲೂಕಿನ ದೋಣಿಗಾಲ್ ರಸ್ತೆಯಿಂದ ಕೆಸಗನಹಳ್ಳಿ ರಸ್ತೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಆದೇಶಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ಮಂಜ್ರಾಬಾದ್ ಕೋಟೆಯ ಸಮೀಪ ದೋಣಿಗಲ್ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದು ಪಕ್ಕದ ಭೂಮಾಲೀಕರು ಕಾಮಗಾರಿ ತಡೆದು ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಬೈಪಾಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ವಿಭಾಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಫೆ. 9 ರಿಂದ ಮಾ. 7ರ ವರೆಗೆ ಬೆಂಗಳೂರು-ಮಂಗಳೂರು ಘೆಏ-75ರ 222+900 ರಿಂದ 223+700 ದೋಣಿಗಾಲ್ ರಸ್ತೆಯಿಂದ ಕೆಸಗನಹಳ್ಳಿ ರಸ್ತೆ ವರೆಗೆ ಕಾಮಗಾರಿ ನಡೆಯಲಿದೆ. ಕಾಮಗಾರಿ ನಡೆಯುವ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ನಿಷೇಧಿತ ಪ್ರದೇಶದಲ್ಲಿ 5 ಜನರಿಗಿಂತ ಹೆಚ್ಚು ಗುಂಪಾಗಿ ಸೇರುವಂತಿಲ್ಲ. ಈ ಅವಧಿಯಲ್ಲಿ ಆಯುಧ ಹಾಗು ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಯಾವುದೇ ರೀತಿಯ ಪ್ರಚಾರ ಸಾಮಾಗ್ರಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಿ ಪ್ರಚಾರ ಮಾಡಲು ಅವಕಾಶವಿರುವುದಿಲ್ಲ. ಈ ಆದೇಶವು ಕಾಮಗಾರಿ ನಡೆಸುವ ಅಧಿಕಾರಿ/ಸಿಬ್ಬಂದಿ ಹೊರತುಪಡಿಸಿ ಇತರರು ಯಾರು ನಿಷೇಧಿತ ಪ್ರದೇಶದೊಳಗೆ ಪ್ರವೇಶಿಸುವಂತಿಲ್ಲ. ಮೇಲ್ಕಂಡ ನಿಬಂಧನೆಗಳನ್ನು ಉಲಂಘಿಸಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದೆಂದು ಆದೇಶದಲ್ಲಿ ಎಚ್ಚರಿಸಿದ್ದಾರೆ.
