ಸಕಲೇಶಪುರ: ತಾಲ್ಲೂಕಿನ ಹೆನ್ನಲಿ ಗ್ರಾಮದಲ್ಲಿ ಅಕ್ರಮವಾಗಿ ಮರಳು  ಶೇಖರಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ಸುಪ್ರೀತಾ ಅವರ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ ಏಳು ಟಿಪ್ಪರ್ ನಷ್ಟು ಮರಳು ವಶಪಡಿಸಿಕೊಂಡ ಘಟನೆ ನಡೆದಿದೆ.
ತಾಲ್ಲೂಕಿನ ವಿವಿಧೆಡೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಸ್ಥಳದಲ್ಲಿ ಅಕ್ರಮವಾಗಿ ಶೇಖರಿಸಿದ್ದ ಮರಳನ್ನು ವಶಕ್ಕೆ ಪಡೆದು ತಾಲ್ಲೂಕು ಕಚೇರಿ ಸಮೀಪ  ಸುರಿಯಲಾಗಿದೆ.
ತಹಶೀಲ್ದಾರ್ ಸುಪ್ರೀತಾ ಅವರು ಮಾತನಾಡಿ, ಸರ್ಕಾರದ ಅನುಮತಿ ಇಲ್ಲದೆ ಮರಳು ಶೇಖರಣೆ ಮಾಡುವುದು ಕಾನೂನು ಬಾಹಿರವಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ ಅಕ್ರಮವಾಗಿ ಪಡೆದುಕೊಂಡ ಮರಳನ್ನು ಬಳಸಿ ಕಟ್ಟಡ ಕಾಮಗಾರಿ ನಡೆಸುತ್ತಿರುವುದು ಕಂಡುಬಂದರೆ, ಸಂಬಂಧಿಸಿದ ಕಟ್ಟಡ ಮಾಲೀಕರ ಮೇಲೆಯೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಗರ ಪೊಲೀಸ್ ಇನ್ಸ್ ಪೆಕ್ಟರ್ ವನರಾಜು, ಕಂದಾಯ ನಿರೀಕ್ಷಕ ದಾನ್ ಪ್ರಕಾಶ್ ಹಾಗೂ ಗ್ರಾಮಾಧಿಕಾರಿ ಶಿಲ್ಪ ಸೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *