ಹಾಸನ: ಕುಟುಂಬದ ಆಧಾರ ಸ್ತಂಭವಾಗಿದ್ದ ಹದಿಹರೆಯದ ಮಗ ಏಕಾಏಕಿ ನಾಪತ್ತೆಯಾದ್ದರಿಂದ ಮಾನಸಿಕವಾಗಿ ತೀವ್ರ ಕುಗ್ಗಿದ ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಉಸಿರು ನಿಲ್ಲುವ ಮೊದಲು ಒಂದು ಸಲ ನೋಡಬೇಕೆಂದು ಅಂಗಲಾಚುತ್ತಿದ್ದಾರೆ.
ದುದ್ದ ಹೋಬಳಿ ಜಕ್ಕೇನಹಳ್ಳಿ ಗ್ರಾಮದ ಜಗದೀಶ್‌ ಎಂಬುವವರ ಮಗ ದೀಪಕ್‌ನ ಬರುವಿಕೆಗಾಗಿ ಕಳೆದ ಎರಡು ತಿಂಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮಗನ ಚಿಂತೆಯಲ್ಲಿ ಹಾಸಿಗೆ ಹಿಡಿದಿರುವ ಅವರ ಆರೈಕೆಯನ್ನು ಇಳಿವಯಸ್ಸಿನ ತಾಯಿ ಸಣ್ಣಮ್ಮ ಮಾಡುತ್ತಿದ್ದಾರೆ. ತೀವ್ರ ಬಡತನ, ಅನಕ್ಷರಸ್ತರಾದ್ದರಿಂದ ಸಣ್ಣಮ್ಮ ಅವರಿಗೆ ದಿಕ್ಕು ತೋಚದಂತಾಗಿದೆ. ಮೊಮ್ಮಗ ಮನೆ ಬಿಟ್ಟು ಹೋದಾಗ ಹತ್ತಿರದ ಠಾಣೆಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿಲ್ಲ. ಅವರಿಗೆ ಸಲಹೆ ನೀಡಲು ಹತ್ತಿರದ ಬಂಧುಗಳಿಲ್ಲ. ಹೀಗಾಗಿ ಮೊಮಗನ ಬರುವಿಕೆಗೆ ಸಣ್ಣಮ ಸಹ ಕಾಯುತ್ತಲೇ ಇದ್ದಾರೆ.

ಏಕಾಏಕಿ ಮನೆ ಬಿಟ್ಟ ದೀಪಕ್‌:
ಎಂಟನೇ ತರಗತಿ ವರೆಗೆ ಓದಿರುವ ದೀಪಕ್‌ ಹಾಸನದ ಬಿ.ಕಾಟಿಹಳ್ಳಿಯ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆತನ ತಾಯಿ 20 ವರ್ಷಗಳ ಹಿಂದೆಯೇ ಹೆಣ್ಣು ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ದಶಕಗಳಿಂದ ಸಣ್ಣಮ್ಮ, ಜಗದೀಶ್‌ ಹಾಗು ದೀಪಕ್‌ ಮಾತ್ರ ಮನೆಯಲ್ಲಿದ್ದರು. ಕುಟುಂಬ ನಿರ್ವಹಣೆಗಾಗಿ ದೀಪಕ್‌ ಬಾಲ್ಯದಿಂದಲೂ ಹೋಟೆಲ್‌, ದಿನಸಿ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಎರಡು ತಿಂಗಳಿಂದ ಮನೆಯಿಂದ ಹೋದವನು ವಾಪಾಸ್‌‍ ಬಂದಿಲ್ಲ. ಕೋಳಿ ಅಂಗಡಿಯವರು ಫೋನ್‌ ಮಾಡಿದ್ದಾರೆ, ತುರ್ತಾಗಿ ಹೋಗಬೇಕೆಂದು ಉಪಾಹಾರ ಸಹ ಮಾಡದೆ ಉಟ್ಟ ಬಟ್ಟೆಯಲ್ಲೇ ಹೋದವನು ಈ ವರೆಗೆ ಬಂದಿಲ್ಲ. ಆತನ ಬಳಿಯಿದ್ದ ಮೊಬೈಲ್‌ ಸ್ವಿಚ್ ಸ್ಟಾಫ್ ಆಗಿದೆ. ಕಾಟಿಹಳ್ಳಿಯ ಯಾವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನೆಂಬುದು ಗೊತ್ತಿಲ್ಲ. ಯಾರಿಗಾದರೂ ದೀಪಕ್‌ನ ಸುಳಿವು ಸಿಕ್ಕರೆ ಊರಿಗೆ ಕಳುಹಿಸಿಕೊಡಿ, ಅವರ ಅಪ್ಪ ಜೀವ ಬಿಡುವುದರೊಳಗೆ ಭೇಟಿಯಾಗಲು ಸಹಕರಿಸಿ ಎಂದು ಸಣ್ಣಮ್ಮ ಅವರು ಅಂಗಲಾಚಿದ್ದಾರೆ. ಯುವಕನ ಸುಳಿವು ಸಿಕ್ಕರೆ ಹತ್ತಿರದ ಪೊಲೀಸ್‌‍ ಠಾಣೆ ಅಥವಾ 9900146973 ಇಲ್ಲಿಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *