ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಪುಣ್ಯಧಾಮದಲ್ಲಿ ಫೆ.21 ಶನಿವಾರ ಶ್ರೀ ಶನೇಶ್ಚರ ಹಾಗೂ ಶ್ರೀ ಜಡೆ ಮುನೇಶ್ವರ ಸ್ವಾಮಿಯ 28 ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ ಎಂದು ಧರ್ಮಾಧಿಕಾರಿಗಳಾದ ಶ್ರೀ ಶ್ರೀಧರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕೆ.ಹೊಸೂರು ಗೇಟ್ ಬಳಿಯಿರುವ ಶ್ರೀಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀಗಳು ಮಾತನಾಡಿ, ಫೆ.21 ಶನಿವಾರ ಮುಂಜಾನೆ ದೇಗುಲಗಳಿಗೆ ಹೂವಿನ ಚಪ್ಪರ ಕಾರ್ಯ ಜರುಗಲಿದ್ದು ಮೊದಲಿಗೆ ಶ್ರೀ ವಿಘ್ನೇಶ್ವರ ಹಾಗೂ ಗಂಗಾಪೂಜೆ ಬಳಿಕ ಶ್ರೀ ಶನೇಶ್ವರ ಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಅಭಿಷೇಕ ನಡೆಯಲಿದೆ ಎಂದರು.

ಬೆಳಗ್ಗೆ 9.15 ಗಂಟೆಗೆ ಅಗ್ನಿಕೊಂಡ ಹಚ್ಚುವ ಪೂಜಾ ಕಾರ್ಯಕ್ರಮ, ಮಧ್ಯಾಹ್ನ 1 ಗಂಟೆಗೆ ಸುಗಮ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಗೆ ಕಳಸ ಪ್ರತಿಷ್ಠಾಪನೆ, ಮಂಗಳವಾದ್ಯದೊಂದಿಗೆ ಉತ್ಸವ ಸಮೇತ ಶ್ರೀ ಸ್ವಾಮಿಯವರನ್ನು ನಡೆಮುಡಿ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದು ತಿಳಿಸಿದರು.

ಸಂಜೆ 5 ಗಂಟೆಗೆ ಬಾಳೆ ಕಂಬದ ಪೂಜೆ, ಅಗ್ನಿಕೊಂಡ ಪೂಜೆ ನಂತರ ಅಗ್ನಿಕೊಂಡ ಹಾಯುವ ಸೇವೆ ಕಾರ್ಯ ಜರುಗಲಿದ್ದು ಸಂಜೆ 7.30 ಕ್ಕೆ ಧಾರ್ಮಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದ ಶಾಸಕರಾದ ಸಿ.ಎನ್.ಬಾಲಕೃಷ್ಣ, ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಜೆಡಿಎಸ್ ಮುಖಂಡ ಸಿ.ಎನ್.ಶಶಿಧರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾತ್ರಿ 9‌.30ಕ್ಕೆ ಹಾಸನದ ಶ್ರೀ ವಿನಾಯಕ ಡ್ರಾಮ ಸೀನರಿಯೊಂದಿಗೆ ಭವ್ಯ ರಂಗಸಜ್ಜಿಗೆಯಲ್ಲಿ ಬೆಂಗಳೂರಿನ ಶ್ರೀ ಹದ್ದಿನಕಲ್ಲು ಮಾರುತಿ ಕಲಾ ಬಳಗದ ವತಿಯಿಂದ ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಉತ್ಸವದಲ್ಲಿ ಬೆಳಗಿಹಳ್ಳಿ ಹಾಗೂ ಹಿರೀಸಾವೆಯ ದಿ.ಕೃಷ್ಣಪ್ಪ ಮತ್ತು ತಂಡದವರಿಂದ ನಾದಸ್ವರ ವಾದ್ಯ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಹಾಗೂ ಮಂಡ್ಯ ಗಂಗಣ್ಣನವರ ತಂಡದಿಂದ ಕಂಸಾಳೆ ನೃತ್ಯ ಮೇಳೈಸಲಿದೆ ಎಂದು ತಿಳಿಸಿದರು.

ಪ್ರತಿವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದು ದೇವರ ದರ್ಶನ, ವಾಹನ ನಿಲುಗಡೆ, ಕುಡಿಯುವ ನೀರು ಹಾಗೂ ಅನ್ನದಾಸೋಹ ಸೇರಿದಂತೆ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರೂಪಿಸಲಾಗಿದೆ. ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *