ಚನ್ನರಾಯಪಟ್ಟಣ: ಯುವ ಪೀಳಿಗೆಯಲ್ಲಿ ಮಾದಕ ವ್ಯಸನವು ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಬಿ.ಸಿ. ಭಗವಾನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಸ್ಥ್ಯ ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದ ಭಾಗವಾಗಿ
ಮಾತನಾಡಿದ ಅವರು, ಮಾದಕ ವ್ಯಸನವು ಮಾದಕ ದ್ರವ್ಯಗಳನ್ನು ಬಳಸುವ ವ್ಯಕ್ತಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಕುಟುಂಬಗಳು, ಸಮುದಾಯಗಳು ಮತ್ತು ಒಟ್ಟಾರೆಯಾಗಿ ಸಮಾಜಕ್ಕೂ ವಿಸ್ತರಿಸುತ್ತವೆ ಎಂದರು.

ಮಾದಕ ದ್ರವ್ಯಗಳ ದುರುಪಯೋಗದ ಹೆಚ್ಚಳವು ಅಪರಾಧ ದರಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಸಾಮಾಜಿಕ ಯೋಗಕ್ಷೇಮದ ಮೇಲೆ ಒಟ್ಟಾರೆ ಹಾನಿಕಾರಕ ಪರಿಣಾಮವನ್ನು ಬೀರಿದೆ. ಮಾದಕ ವ್ಯಸನ ತಡೆಯಲು ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ, ವಿದ್ಯಾರ್ಥಿಗಳಲ್ಲಿ ನಶೆ ಮುಕ್ತ ಜೀವನಶೈಲಿ ಉತ್ತೇಜನ ನೀಡುವ ಉದ್ದೇಶದಿಂದ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜೀವನ ಸಾರ್ಥಕತೆ ಸಂಸ್ಥೆಗಳ ಸಹಯೋಗದೊಂದಿಗೆ ಯುವಜನರಲ್ಲಿ ಮಾದಕವಸ್ತು ವ್ಯಸನ ಮುಕ್ತಗೊಳಿಸಲು ಮತ್ತು ಅಂಗಾಂಗ ದಾನದ ಮಹತ್ವ ತಿಳಿಸಲು ‘ನಶಾ ಮುಕ್ತ ಭಾರತ, ಕರ್ನಾಟಕ, ಕ್ಯಾಂಪಸ್ ಹಾಗೂ ಅಂಗಾಂಗ ದಾನ ಅಭಿಯಾನ’ಗಳನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದರು.

ಇದು ಆರೋಗ್ಯವಂತ ಸಮಾಜ ಮತ್ತು ಸುರಕ್ಷಿತ ಕ್ಯಾಂಪಸ್ ಪರಿಸರವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
ಕರ್ನಾಟಕದಾದ್ಯಂತ ಇರುವ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಯಲಿರುವ ಮಹತ್ವದ ಜಾಗೃತಿ ಅಭಿಯಾನ ಮಾದಕ ದ್ರವ್ಯ ಬಳಕೆಯನ್ನು ತಡೆಗಟ್ಟಲು ಒಟ್ಟಾಗಿ ಹೋರಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು.

ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು,
ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿಗಳ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಈಗಾಗಲೇ ಈ ಅಭಿಯಾನ ವನ್ನು ಆರಂಭಿಸಿದ್ದು, ಹಾಸನ ಜಿಲ್ಲೆ 10ನೇಯದಾಗಿದೆ. ಈಗಾಗಲೇ ಸುಮಾರು 45 ಸಾವಿರ ವಿದ್ಯಾರ್ಥಿಗಳನ್ನು ತಲುಪಿದ್ದು, ಫೆ 27 ಮತ್ತು 28 ರಂದು ವಿಜಯಪುರ, ಬೆಳಗಾಂ, ರಾಯಚೂರು ಜಿಲ್ಲೆಗಳಲ್ಲೂ ಅಭಿಯಾನ ನಡೆಸಲಾಗುವುದು ಎಂದರು.

ಇನ್ನೆರಡು ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಕಾಠ್ಯಕ್ರಮ ರೂಪಿಸಿ ನಮ್ಮ ಆರೋಗ್ಯ ದೇಶದ ಆರೋಗ್ಯ ಎಂಬ ಸಂದೇಶ ಸಾರಲಾಗುವುದು. ಇಂತಹ ಅಭಿಯಾನಗಳಿಂದ ಮಾದಕ ದ್ರವ್ಯ ವಿರುದ್ಧದ ಹೋರಾಟ ಗಳನ್ನು ಮತ್ತಷ್ಟು ಶಕ್ತಿಯುತಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಅದರಲ್ಲೂ ಯುವಪೀಳಿಗೆ ಹೆಚ್ಚು ಗಮನ ಹರಿಸಬೇಕಿದೆ. ಇಂತಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕಿದೆ. ಮಾದಕ ದ್ರವ್ಯವು ಬಳಕೆದಾರರಿಗೆ ಮಾತ್ರವಲ್ಲ ಅವರ ಕುಟುಂಬಗಳಿಗೆ ಮತ್ತು ಸಮಾಜಕ್ಕೂ ಮಾರಕವಾಗಿದೆ ಎಂಬ ಸಂದೇಶ ಎಲ್ಲರನ್ನೂ ತಲುಪಬೇಕಿದೆ ಎಂದು ಎಚ್ಚರಿಸಿದರು.

ಡ್ರಗ್ಸ್‌ ಚಟಕ್ಕೆ ದಾಸರಾದವರ ಮಾಹಿತಿಯನ್ನು ಮುಚ್ಚಿಡುತ್ತಿರುವುದರಿಂದ ಬೇಗನೆ ಮಾಹಿತಿ ದೊರೆಯದಂತಾಗಿದೆ. ರಾಜ್ಯದಲ್ಲಿ ಕಳೆದೆರಡು ವರ್ಷದಲ್ಲಿ ಶೇ.63ರಷ್ಟು ಹೆಚ್ಚಾಗಿದ್ದು, ನಮ್ಮ ವಿವಿ ವ್ಯಾಪ್ತಿಯಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಪತ್ತೆಯಾಗಿವೆ. ವಿದ್ಯಾರ್ಥಿ ಪ್ರತಿನಿಧಿ, ಪೊಲೀಸ್ ಹಾಗೂ ಶಿಕ್ಷಕರನ್ನೊಳಗೊಂಡ ಡ್ರಗ್ಸ್ ನಿಯಂತ್ರಣತಂಡವನ್ನು ಪ್ರತಿ ಕಾಲೇಜಿನಲ್ಲೂ ರಚಿಸಿದ್ದು, ನಾರ್ಕೋಟಿಕ್ ನಿಯಂತ್ರಣ ಬ್ಯೂರೋದೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಳ್ಳಲಾಗಿದೆ. ಈ ತಂಡದ ವರದಿಯನ್ನಾಧರಿಸಿ ಕಾಲೇಜುಗಳ ನೋಂದಣಿಯ ನವೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಶ್ರೇಷ್ಠ ದಾನಗಳಲ್ಲಿ ಅಂಗಾಂಗ ದಾನವು ಕೂಡ ಒಂದು. ಆದರೆ ಈ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಅದಕ್ಕಾಗಿಯೇ ಅಂಗಾಂಗ ದಾನ ಮಾಡುವವರ ಸಂಖ್ಯೆ ಕೂಡ ಕಡಿಮೆ. ಈ ಬಗ್ಗೆ ಅರಿವಿನ ಕೊರತೆ ಹೆಚ್ಚಿದೆ. ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದು. ಆದರೆ ಅದಕ್ಕಿರುವ ಸೂಕ್ತ ವಿಧಾನ ಅನುಸರಿಸಬೇಕು ಎಂದು ಸಲಹೆ ನೀಡಿದರು.

ಅಂಗಾಂಗ ಅಗತ್ಯವಿರುವಷ್ಟು ಪ್ರಮಾಣದಲ್ಲಿ ದಾನಿಗಳು ಸಿಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ನಮ್ಮ ಕೈಯಲ್ಲಿ ಮತ್ತೊಬ್ಬರ ಜೀವ ಉಳಿಸುವ ಅವಕಾಶವಿದ್ದಾಗ ಅದನ್ನು ಬಳಸಿಕೊಳ್ಳಬೇಕು. ಒಬ್ಬರ ಜೀವನಕ್ಕೆ ಬೆಳಕಾಗುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ ಆದ್ದರಿಂದ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನ ಮಾಡಲು ಜನರನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ ಎಂದರು.

ಅಂಗಾಂಗದಾನಕ್ಕೂ ನಮ್ಮ ವಿವಿ ಒತ್ತುನೀಡುತ್ತಿದ್ದು ಸದ್ಯ 58 ಸಾವಿರ ಮಂದಿ ತಮ್ಮ ಅಂಗಾಂಗದಾನಕ್ಕೆ ನೊಂದಣಿ ಮಾಡಿಕೊಂಡಿದ್ದು ಇದರ ನಾಲ್ಕುಪಟ್ಟು ಬೇಡಿಕೆ ಇದೆ. ವಿವಿಯಿಂದಲೇ ಸುಮಾರು 7 ಸಾವಿರ ಅಂಗಾಂಗದಾನಕ್ಕೆ ನೊಂದಣಿ ಮಾಡಿಸಲಾಗಿದೆ. ಈ ಕುರಿತಂತೆಯೂ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿದೆ
ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಂಡಿಕೇಟ್ ಸದಸ್ಯರಾದ
ಡಾಎಸ್.ಎ.ನಿತಿನ್, ಡಾ.ರಾಮಚಂದ್ರ ಪ್ರಭು, ಡಾ. ಮಧುಸೂದನ್, ಡಾ.ಓಬಳರೆಡ್ಡಿ, ನವೋದಯ ವಿದ್ಯಾಸಂಗದ ಅಧ್ಯಕ್ಷ ಸಿ.ಜೆ.ಮಂಜುನಾಥ್, ಕಾರ್ಯದರ್ಶಿಕೆ.ಪಿ. ಶರತ್ ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *