ಹಾಸನ: ಪರಿಸರ ಸಂರಕ್ಷಣೆ ಎಂದರೆ ಕೇವಲ ಸುಂದರ ಪದಪುಂಜಗಳ ವರ್ಣನೆಯಲ್ಲ ಅಥವಾ ದಿನಾಚರಣೆಯ ಸಂಮೋಹನ ಭಾಷಣವೂ ಅಲ್ಲ. ಇದು ಮಾತಿಗಿಂತ ಕೃತಿಯಲ್ಲಿ ತೋರಬೇಕಾದ ಮಹತ್ಕಾರ್ಯ. ಹಾಸನದ ಎಲ್.ವಿ. ಪಾಲಿಟೆಕ್ನಿಕ್ ಈ ನಿಟ್ಟಿನಲ್ಲಿ ಮಾದರಿಯಾಗಿ ರೂಪುಗೊಂಡಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ (BGVS) ತಾಲ್ಲೂಕು ಅಧ್ಯಕ್ಷ ಡಾ. ಎಚ್.ಜಿ. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಎಲ್.ವಿ. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಇತ್ತೀಚೆಗೆ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬದುಕು ಮತ್ತು ಪರಿಸರ – ನಮ್ಮ ಹಕ್ಕು, ನಮ್ಮ ಕರ್ತವ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಸಿರು ಉಗ್ರಾಣವಾಗಲಿರುವ ಕಾಲೇಜು ಆವರಣ
ಕಳೆದ 5-6 ತಿಂಗಳುಗಳಿಂದ ಎಲ್.ವಿ. ಪಾಲಿಟೆಕ್ನಿಕ್ ಆವರಣದಲ್ಲಿ ಬಿಜಿವಿಎಸ್ ಸಹಯೋಗದೊಂದಿಗೆ ಹಣ್ಣಿನ ವನ ಹಾಗೂ ಜಪಾನಿ ಮೂಲದ ‘ಮಿಯಾವಾಕಿ’ ಮಾದರಿ ಅರಣ್ಯವನ್ನು ನಿರ್ಮಿಸಲಾಗಿದೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಈ ಬಗ್ಗೆ ಮಾತನಾಡಿದ ಡಾ. ಮಂಜುನಾಥ್, “ಇನ್ನೇರಡು ವರ್ಷಗಳಲ್ಲಿ ಈ ಪುಟ್ಟ ಕಾಡು ನಗರದ ಮಧ್ಯಭಾಗದಲ್ಲಿ ಪರಿಸರಾಧ್ಯಯನದ ಜೀವಂತ ಮಾದರಿಯಾಗಿ ಹೊರಹೊಮ್ಮಲಿದೆ. ಇದು ಸುತ್ತಮುತ್ತಲಿನ 5-6 ಕಿಲೋಮೀಟರ್ ವ್ಯಾಪ್ತಿಯ ಜನರಿಗೆ ಶುದ್ಧ ಆಮ್ಲಜನಕ ಪೂರೈಸುವ ಹಸಿರು ಉಗ್ರಾಣವಾಗಲಿದೆ,” ಎಂದರು. ಪರಿಸರ ಸಂರಕ್ಷಣೆ ನಿರಂತರ ಚಟುವಟಿಕೆಯಾಗಲು ಕಾಲೇಜಿನಲ್ಲಿ ತಕ್ಷಣವೇ ‘ಇಕೋ ಕ್ಲಬ್’ ಸ್ಥಾಪಿಸಬೇಕೆಂದು ಅವರು ಕರೆ ನೀಡಿದರು.
BGVS ಜಿಲ್ಲಾ ಸಮಿತಿ ಸದಸ್ಯರಾದ ಅಹಮದ್ ಹಗರೆ ಅವರು ಪಿಪಿಟಿ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರಿಸರದ ಗಂಭೀರ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದರು. ಸಂವಿಧಾನದ ಕಲಂ 51A ರಡಿ ಪರಿಸರ ರಕ್ಷಣೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ ಎಂದು ಅವರು ನೆನಪಿಸಿದರು. “ನಮ್ಮ ದೇಶದಲ್ಲಿ ಅರಣ್ಯದ ಪ್ರಮಾಣ ಕೇವಲ ಶೇ. 21-24 ರಷ್ಟಿದ್ದು, ರಾಷ್ಟ್ರೀಯ ಅರಣ್ಯ ನೀತಿಯಂತೆ ಅದು ಕನಿಷ್ಠ ಶೇ. 33 ಇರಬೇಕು,” ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದರು. ಜಾಗತಿಕ ತಾಪಮಾನ ಏರಿಕೆ, ನೀರಿನ ಬಡತನ ಹಾಗೂ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದ ಅವರು, ತ್ಯಾಜ್ಯ ನಿರ್ವಹಣೆಗೆ 3R (Reduce, Reuse, Recycle) ಸೂತ್ರವೇ ವೈಜ್ಞಾನಿಕ ಪರಿಹಾರ ಎಂದರು.
