ಹಾಸನ: ಹಿಮೋಫಿಲಿಯಾ ಎಂಬುದು ಅಪರೂಪದ ರೋಗವಾದರೂ ಅದರ ನೋವು ಮತ್ತು ಸಂಕಷ್ಟಗಳು ರೋಗಿ ಹಾಗೂ ಕುಟುಂಬದ ಜೀವನವನ್ನೇ ಬದಲಾಯಿಸುತ್ತವೆ. ಈ ರೋಗಿಗಳ ಆರೋಗ್ಯ ಭದ್ರತೆ ಮತ್ತು ಗೌರವಯುತ ಬದುಕಿಗಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪದಶ್ರೀ ಪುರಸ್ಕೃತ ಡಾ. ಸುರೇಶ್ ಹನಗವಾಡಿ ಹೇಳಿದರು.
ನಗರದ ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ವೈದ್ಯರ ಹಬ್ಬ2026 ಹಾಗೂ ನ್ಯೂಬರ್ಗ್ ಆನಂದದಾಸ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಹಿಮೋಫಿಲಿಯಾ ರೋಗದ ಸ್ವರೂಪ, ರಕ್ತದ ಜಮಾವಣೆ ಸಮಸ್ಯೆಯಿಂದ ಉಂಟಾಗುವ ಗಂಭೀರ ಪರಿಣಾಮ ಹಾಗೂ ತಡವಾದ ಚಿಕಿತ್ಸೆಯಿಂದ ಎದುರಾಗುವ ಅಪಾಯಗಳನ್ನು ವಿವರಿಸಿದರು.
ಹಿಮೋಫಿಲಿಯಾ ಕುರಿತು ಇನ್ನೂ ಗ್ರಾಮೀಣ ಭಾಗಗಳಲ್ಲಿ ಅರಿವು ಕೊರತೆ ಇರುವುದನ್ನು ಉಲ್ಲೇಖಿಸಿದ ಅವರು, ಸಮಯೋಚಿತ ಪರೀಕ್ಷೆ, ಸರಿಯಾದ ಮಾರ್ಗದರ್ಶನ ಮತ್ತು ನಿರಂತರ ಚಿಕಿತ್ಸೆಮೂಲಕ ರೋಗಿಗಳು ಸಾಮಾನ್ಯ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ರೋಗಿಗಳಿಗೆ ನೆರವಾಗುತ್ತಿರುವುದನ್ನು ವಿವರಿಸಿದರು.
ಭಾರತೀಯ ವೈದ್ಯಕೀಯ ಸಂಘದ ಹಾಸನ ಶಾಖೆಯ ಅಧ್ಯಕ್ಷ ಡಾ. ಎನ್. ಶ್ರೀರಂಗ ಉದ್ಘಾಟಿಸಿದರು. ಆನಂದದಾಸ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಯ ಡಾ. ಎಚ್.ಆರ್. ದೇವದಾಸು ಸ್ವಾಗತಿಸಿದರು. ನ್ಯೂಬರ್ಗ್ ಗ್ರೂಪ್‌ನ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ. ಸುಜಯ್ ಪ್ರಸಾದ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ನವೀಕರಣ ಮತ್ತು ಗುಣಮಟ್ಟದ ಸೇವೆಗಳ ಅಗತ್ಯತೆಯನ್ನು ಒತ್ತಿಹೇಳಿದರು.
ಡಾ. ಸುರೇಶ್ ಹನಗವಾಡಿ ಹಾಗೂ ಅವರ ಪತ್ನಿ ಡಾ. ಮೀರಾ ಎಸ್. ಹನಗವಾಡಿ ಅವರನ್ನು ಸನಾನಿಸಲಾಯಿತು. ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಕಾರ್ಯಕಾರಿ ಅಧಿಕಾರಿ ನವೀನ್ ಹವಳಿ ಅವರಿಗೆ ಗೌರವಿಸಲಾಯಿತು.
